ಕ್ರಾಕಟ್, ಸಾಮ್ಯುಯಲ್ ರದರ್‍ಫರ್ಡ್
1860-1914 ಆಂಗ್ಲ ಕಾದಂಬರಿಕಾರ, ಪಾದ್ರಿ. ಎಡಿನ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಮುಗಿಸಿ ಶಿಕ್ಷಕನಾಗಿ ಜರ್ಮನಿ, ಸ್ವಿಟ್ಸರ್‍ಲೆಂಡ್, ಇಟಲಿ ದೇಶಗಳಲ್ಲಿ ಸುತ್ತಿ ಬಂದು ಮತ್ತೆ ಎಡಿನ್‍ಬರ್ಗ್‍ನಲ್ಲಿ ವೇದಾಂತವನ್ನು ಅಭ್ಯಾಸ ಮಾಡಿದ. 1886ರಲ್ಲಿ ಮಿಡ್ಲೋಥಿಯನ್ನಿನಲ್ಲಿ ಪಾದ್ರಿಯಾದ. ಅದೇ ವರ್ಷ ಡಲ್ಸ್ ಕೊರ್ ಎಂಬ ಕವನ ಸಂಕಲನವನ್ನು ಪ್ರಕಟಿಸಿದ. 1893ರಲ್ಲಿ ದಿ ಸ್ಟಿಕಿಟ್ ಮಿನಿಸ್ಟರ್ ಎಂಬ, ವ್ಯಕ್ತಿಚಿತ್ರಗಳಿಂದ ಕೂಡಿದ ಪುಸ್ತಕವನ್ನು ಪ್ರಕಟಿಸಿದ. ಇದು ಜನಪ್ರಿಯತೆ ಗಳಿಸಿತು. ಅನಂತರ ಪ್ರಕಟಗೊಂಡ ದಿ ರೇಯ್‍ಡರ್ಸ್ ಮತ್ತು ದಿ ಲಿಲ್ಯಾಕ್ ಸನ್‍ಬಾನೆಟ್ ಕಾದಂಬರಿಗಳು ಈತನಿಗೆ ಯಶಸ್ಸು ತಂದವಾಗಿ ಈತ ಪಾದ್ರಿ ಕೆಲಸವನ್ನು ಬಿಟ್ಟು ಬರೆವಣಿಗೆಯ ಕಡೆಗೇ ಪೂರ್ಣ ಗಮನವಿತ್ತ.

ಈತ ಬರೆದ ಸುಮಾರು 40 ಪುಸ್ತಕಗಳಲ್ಲಿ ದಿ ಮೆನ್ ಆಫ್ ದಿ ಮಾಸ್ ಹ್ಯಾಗ್ಸ್ (1895), ದಿ ಗ್ರೇ ಮ್ಯಾನ್ (1896), ಕಿಟ್ ಕೆನಡಿ (1899) ದಿ ಲವ್ಸ್ ಆಫ್ ಮಿಸ್ ಆನ್ (1904), ದಿ ಹ್ವೈಟ್ ಪ್ಲ್ಯೂಮ್ಸ್ ಆಫ್ ನಾವರೆ (1909)-ಇವು ಮುಖ್ಯವಾದವು. ಕಾದಂಬರಿ ಕ್ಷೇತ್ರದಲ್ಲಿ ಈತ ಕೇಲ್‍ಯಾರ್ಡ್ ಪಂಥದ ಮುಂದಾಳುಗಳಲ್ಲಿ ಒಬ್ಬನಾಗಿದ್ದನಲ್ಲದೆ ಆರ್.ಎಲ್. ಸ್ಟೀವನ್‍ಸನ್ನದ ಮೆಚ್ಚಿಕೆಗೆ ಪಾತ್ರನಾಗಿದ್ದ ಎಂಬ ವಿಷಯವನ್ನು ಇಲ್ಲಿ ನೆನೆಯಬಹುದು.			(ಎಚ್.ವಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ